ಓಸ್ಕಲೂಸ: ಅಮೆರಿಕ ಸಂಯುಕ್ತಸಂಸ್ಥಾನದ ಆಯೋವ ರಾಜ್ಯದ ಆಗ್ನೇಯ ಭಾಗದಲ್ಲಿರುವ ಒಂದು ಪಟ್ಟಣ. ಜನಸಂಖ್ಯೆ 11,463 (2010). ಪಶುಪಾಲನೆ ಮತ್ತು ಕೃಷಿಗಳ ಕೇಂದ್ರ ಮುಸುಕಿನ ಜೋಳ ಮುಖ್ಯ ಬೆಳೆ. ಕಲ್ಲಿದ್ದಲು ಪ್ರದೇಶದಲ್ಲಿದೆ. ಆಹಾರ ಪದಾರ್ಥ, ಅಗ್ನಿಶಾಮಕ ವ್ಯವಸ್ಥೆಗೆ ಬೇಕಾದ ನೀರಿನ ನಲ್ಲಿ. ಕವಾಟ(ವಾಲ್ವ್‌), ಬಟ್ಟೆ ಒಗೆಯುವ ಯಂತ್ರ, ಪಶು ಔಷಧ, ಆಟದ ಸಾಮಾನು ಮುಂತಾದುವುಗಳ ಕೈಗಾರಿಕೆಗಳಿವೆ. ಸಂಗೀತ ಪ್ರಕಟಣೆಗಳಿಗೂ ಇದು ಪ್ರಸಿದ್ಧವಾಗಿದೆ. ಇದೊಂದು ವ್ಯಾಪಾರಸ್ಥಳ. 

ಶಾಂತಿತತ್ತ್ವಗಳಲ್ಲಿ ನಿಷ್ಠೆಯುಳ್ಳ, ಸರಳ ನಡೆನುಡಿಯ, ಬಿರುದುಗಳನ್ನು ನಿರಾಕರಿಸುವ, ಕ್ರೈಸ್ತೇತರ ಧರ್ಮಸೂಚಕ ಪದಗಳನ್ನು ಬಳಸಲೊಲ್ಲದ ಪುರೋಹಿತರಹಿತ ಧರ್ಮಸಭೆಗಳಲ್ಲಿ ಕೂಡುವ ಮಿತ್ರಮಂಡಲಿಯವರಾದ ಕ್ವೇಕರುಗಳಿಂದ 1843ರಲ್ಲಿ ಇಲ್ಲಿ ವಸತಿ ಏರ್ಪಟ್ಟಿತು. ಮಸ್ಕೇಜಿಯನ್ ಇಂಡಿಯನರ ಒಂದು ಪಂಗಡವಾದ ಸೆಮಿನೋಲರ ನಾಯಕನಾದ ಒಸ್ಸಿಯೋಲನಿಂದ ಓಸ್ಕಲೂಸ ಎಂಬ ಹೆಸರು ಬಂದಿದೆ. 1844ರಲ್ಲಿ ಇದು ಕೌಂಟಿಯ (ವಿಭಾಗದ) ಮುಖ್ಯಸ್ಥಳವಾಯಿತು. ಇದು ನಗರವೆನೆಸಿ ಕೊಂಡದ್ದು 1853ರಲ್ಲಿ. ವಿಲಿಯಂ ಪೆನ್ ಕಾಲೇಜ್ ಇಲ್ಲಿಯ ಮುಖ್ಯ ಶಿಕ್ಷಣಸಂಸ್ಥೆ. ಇದನ್ನು ಸ್ಥಾಪಿಸಿದವರೂ (1853) ಕ್ವೇಕರರೇ. ಈ ನಗರದಲ್ಲಿ ಕ್ವೇಕರರ ವಾರ್ಷಿಕ ಧಾರ್ಮಿಕ ಸಭೆ ನಡೆಯುತ್ತದೆ.         	(ಪಿ.ಎಚ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ